Loading Events

« All Events

  • This event has passed.

YPS Saturday Meet – Temples of Karnataka – Over the centuries

November 5 @ 6:30 pm - 7:30 pm UTC+5.5

YPS Saturday Meet | Nov 05, Sat | 6:30 PM IST | State Youth Center

 

ದೇವಾಲಯಗಳ ಪರಿಕಲ್ಪನೆ ಮೂಡಿದಾಗಿನಿಂದ ಇಂದಿನವರೆಗೆ ಕರ್ನಾಟಕದಲ್ಲಿ ದೇವಾಲಯಗಳ ನಿರ್ಮಾಣ, ಬೆಳವಣಿಗೆ, ಶಿಲ್ಪಕಲೆ ಮೊದಲಾದವು ಬೆಳೆದುಬಂದ ಬಗೆ ಅಚ್ಚರಿಮೂಡಿಸುವಂತಹುದು. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿರುವ ದೇಗುಲಗಳ ಸ್ವರೂಪ, ಕಟ್ಟಡ, ಶಿಲ್ಪಕಲಾವೈವಿಧ್ಯಗಳು ಇಡೀ ಜಗತ್ತಿನಲ್ಲೇ ಇಂತಹ ಯಾವುದೇ ನಿರ್ಮಾಣಕ್ಕೂ ಸರಿಸಾಟಿಯೆನ್ನಬಹುದಾದ ವೈಭವವನ್ನು ಪ್ರದರ್ಶಿಸುತ್ತಿವೆ. ಆದರೆ, ಬಾದಾಮಿ, ಪಟ್ಟದಕಲ್ಲು, ಹಳೇಬೀಡು, ಬೇಲೂರುಗಳಂಥ ಕೆಲವು ಸ್ಥಳಗಳನ್ನು ಹೊರತುಪಡಿಸಿದಂತೆ ಬಹುತೇಕ ದೇವಾಲಯಗಳು ಅಜ್ಞಾತವಾಗಿಯೇ ಉಳಿದಿದ್ದು ಅಲಕ್ಷ್ಯಅನಾದರಗಳಿಗೆ ಗುರಿಯಾಗಿವೆ. ನಮ್ಮ ಸಂಸ್ಕೃತಿಯ ವೈಭವದ ಪ್ರತೀಕಗಳಾಗಿರುವ ಈ ದೇವಾಲಯಗಳನ್ನು ಸಂರಕ್ಷಿಸಿ, ಪರಿಚಯಮಾಡಿಕೊಳ್ಳುವುದರ ಜೊತೆಗೆ ಮುಂದಿನ ಪೀಳಿಗೆಗಾಗಿ ಇವನ್ನು ರಕ್ಷಿಸಿಡುವುದರ ಕಡೆಗೆ ಜನಜಾಗೃತಿ ಮೂಡಿಸುವುದು ಇಂದಿನ ಆದ್ಯ ಕರ್ತವ್ಯವಾಗಿದೆ.

ಪ್ರಸ್ತುತಿ:  

ಶ್ರೀ ಟಿ.ಎಸ್. ಗೋಪಾಲ್

1955ರಲ್ಲಿ ಹಾಸನದಲ್ಲಿ ಜನಿಸಿದ ಲೇಖಕರ ತಾತ, ತಂದೆ, ಚಿಕ್ಕಪ್ಪಂದಿರೆಲ್ಲರೂ ಭಾಷಾಪಂಡಿತರು.  ಇವರ ತಾತ ಶ್ರೀನಿವಾಸರಂಗಾಚಾರ್ಯರು ನಾಲ್ವಡಿ ಕೃಷ್ಣರಾಜರ ಹಿರಿಮೆಯನ್ನು ಕುರಿತಂತೆ ಮೈಸೂರ ಮೆಯ್ಸಿರಿ ಎಂಬ ಕೃತಿಯನ್ನು ಹಳಗನ್ನಡದಲ್ಲಿ ರಚಿಸಿದವರು. ತಂದೆ ತಿರು. ಶ್ರೀನಿವಾಸಾಚಾರ್ಯರು ವಿದ್ಯಾರ್ಥಿಗಳಿಗಾಗಿ ರಚಿಸಿದ ಪ್ರೌಢಶಾಲಾ ಕನ್ನಡ ವ್ಯಾಕರಣ ಮತ್ತು ಪ್ರಬಂಧರಚನೆ ಪುಸ್ತಕವು 1950-60ರ ದಶಕಗಳಲ್ಲಿ ಬಹುಮುದ್ರಣಗಳನ್ನು ಕಂಡ ಜನಪ್ರಿಯಕೃತಿಯಾಗಿತ್ತು.

ಟಿ.ಎಸ್. ಗೋಪಾಲ್ ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಮತ್ತು ಎಂ.ಎ. (ಕನ್ನಡ) ಪರೀಕ್ಷೆಗಳಲ್ಲಿ ಚಿನ್ನದ ಪದಕಗಳೊಡನೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದರು. 1975ರಿಂದ ಕೊಡಗಿನ ಶ್ರೀಮಂಗಲ ಪದವಿಪೂರ್ವಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸುದೀರ್ಘಸೇವೆ ಸಲ್ಲಿಸಿ 2013ರಲ್ಲಿ ಸ್ವಯಂನಿವೃತ್ತಿ ಪಡೆದುಕೊಂಡರು. 

ಕನ್ನಡ ಭಾಷೆ, ವ್ಯಾಕರಣಗಳನ್ನು ವಿಶೇಷವಾಗಿ ಅಧ್ಯಯನಮಾಡಿರುವ ಶ್ರೀಯುತರು ಭಾಷೆ, ವ್ಯಾಕರಣಗಳಿಗೆ ಸಂಬಂಧಿಸಿದಂತೆ ಕನ್ನಡ ವ್ಯಾಕರಣದ ಪ್ರಾಯೋಗಿಕ ಪಾಠಗಳು, ಕನ್ನಡ ಕೌಶಲ, ಕನ್ನಡ ವ್ಯಾಕರಣ ಪ್ರವೇಶ, ಕೊಡವ-ಕನ್ನಡ ಪದಕೋಶ ಮೊದಲಾದ  ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಭಾಷೆಯನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಬೋಧಕರಿಗೂ ಉಪಯುಕ್ತವಾಗುವಂತೆ ಗೋಪಾಲ್ ಅವರು ನವಕರ್ನಾಟಕ ಕನ್ನಡ ಕಲಿಕೆ ಮಾಲಿಕೆಯಲ್ಲಿ ಇದುವರೆಗೆ 25 ಕಿರುಹೊತ್ತಗೆಗಳನ್ನು ರಚಿಸಿದ್ದಾರೆ. ಇವೆಲ್ಲ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡಿದ್ದು ಈವರೆಗೂ ಒಟ್ಟಾರೆ ಎರಡು ಲಕ್ಷ ಪ್ರತಿಗಳಿಗೂ ಹೆಚ್ಚು  ಮಾರಾಟಗೊಂಡಿರುವುದು ಒಂದು ವಿಶೇಷ. ಸ್ಪರ್ಧಾರ್ಥಿಗಳ ಅಧ್ಯಯನಕ್ಕಾಗಿ ಕನ್ನಡಕ್ಕೊಂದು ಕೈಪಿಡಿ (ಭಾಗ1-2), ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕನ್ನಡ ಎಂಬ ಪುಸ್ತಕಗಳನ್ನೂ ರಚಿಸಿದ್ದಾರೆ.

ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಲ್ಲಿ ಕೆಲಕಾಲ ಮಾಧ್ಯಮ ಸಲಹೆಗಾರರಾಗಿದ್ದ ಶ್ರೀಯುತರು ಭವಿಷ್ಯದ ಭರವಸೆ: ಹಸಿರು ಇಂಧನ ಎಂಬ ಪುಸ್ತಕವನ್ನು ರಚಿಸಿರುವುದಲ್ಲದೆ, ಹಸಿರು ಉಸಿರು ಎಂಬ ನಿಯತಕಾಲಿಕ ಹಾಗೂ   ಜೈವಿಕ ಇಂಧನ- ಬಾಳಿನ ನಂದನ ಎಂಬ ಉಪನ್ಯಾಸಗಳ ಸಂಗ್ರಹದ ಸಂಪಾದಕರೂ ಆಗಿದ್ದಾರೆ.

ಕರ್ನಾಟಕದ ಪ್ರಾಚೀನ ದೇವಾಲಯಗಳ ಸ್ವರೂಪ, ಶಿಲ್ಪಕಲೆಗಳ ಬಗೆಗೆ ವ್ಯಾಪಕವಾಗಿ ಪ್ರವಾಸ, ಅಧ್ಯಯನ ಮಾಡಿರುವ ಲೇಖಕರು ವಿಜಯ ಕರ್ನಾಟಕದ ಬೋಧಿವೃಕ್ಷ  ಪತ್ರಿಕೆಯಲ್ಲಿ ಪ್ರಾಚೀನ ದೇವಾಲಯಗಳನ್ನು ಪರಿಚಯಿಸುವ ಒಂದು ನೂರಕ್ಕೂ ಹೆಚ್ಚು ಅಂಕಣ ಬರೆಹಗಳನ್ನು ಬರೆದಿದ್ದಾರೆ. ಕರ್ನಾಟಕದ ಪುರಾತನ ದೇಗುಲಗಳನ್ನು ಕುರಿತು ಇವರು  ಆಕಾಶವಾಣಿಯಲ್ಲಿ ಸರಣಿಭಾಷಣಗಳನ್ನು ಮಾಡಿರುವುದಲ್ಲದೆ, ಪುರಾತನ ದೇಗುಲಗಳು, ಗುಡಿಗೋಪುರಗಳ ಸುತ್ತಮುತ್ತ, ಹಂಪೆ: ಒಂದು ಸುಂದರ ದೃಶ್ಯಕಾವ್ಯ, ಶ್ರವಣ ಬೆಳ್ಗೊಳ ಮೊದಲಾದ ಪುಸ್ತಕಗಳನ್ನೂ  ಬರೆದಿದ್ದಾರೆ. 

ನಾಡಿನ ಅನೇಕ ಮಹನೀಯರ ಜೀವನ, ವ್ಯಕ್ತಿತ್ವ ಸಾಧನೆಗಳನ್ನು ಪರಿಚಯಿಸುವ ಅನೇಕ ಕಿರುಪುಸ್ತಕಗಳನ್ನೂ ಗೋಪಾಲ್ ಅವರು ರಚಿಸಿದ್ದಾರೆ. ನವಕರ್ನಾಟಕ ವಿಶ್ವಮಾನ್ಯರು ಸರಣಿಯಲ್ಲಿ ಲೇಖಕರು ಬರೆದ ಇಂತಹ 22ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಗೊಂಡಿದ್ದು ಹಲವು ಮುದ್ರಣಗಳನ್ನು ಕಂಡಿವೆ. ಜ್ಞಾನಪೀಠ ಪುರಸ್ಕೃತ ಕನ್ನಡ ಲೇಖಕರನ್ನು ವಿವರವಾಗಿ ಪರಿಚಯಿಸುವ ಶ್ರೀಯುತರ ’ ಜ್ಞಾನಪೀಠಕೆ ಮೆರುಗು-ಕನ್ನಡದ ಬೆಡಗು ’ ಒಂದು ವಿಶಿಷ್ಟವಾದ ಕೃತಿ. 

ಗೋಪಾಲ್ ಅವರು ಶಿಕ್ಷಕರಾಗಿದ್ದ ಅವಧಿಯಲ್ಲಿ ಸಂರಕ್ಷಣಾವಾದಿ ಕೆ.ಎಂ.ಚಿಣ್ಣಪ್ಪನವರೊಡನೆ ನಾಗರಹೊಳೆ ವನ್ಯಜೀವಿ ಸಂರಕ್ಷಣಾ ಯೋಜನೆಯ ಸಂಚಾಲಕರಾಗಿ ನಾಡಿನೆಲ್ಲೆಡೆ ಅರಣ್ಯಸಂರಕ್ಷಣೆಯ ಮಹತ್ತ್ವವನ್ನು ಸಾರುವ ನೂರಾರು ಕಾರ್ಯಕ್ರಮಗಳನ್ನು , ಅನೇಕ ಪ್ರಕೃತಿ ಶಿಬಿರಗಳನ್ನು ನಡೆಸಿದರು. ಕೆ.ಎಂ. ಚಿಣ್ಣಪ್ಪನವರ ಬದುಕನ್ನು ಕುರಿತು ಗೋಪಾಲ್ ರಚಿಸಿದ ’ಕಾಡಿನೊಳಗೊಂದು ಜೀವ ’ ಅನುಭವಕಥನವು ಈ ಮಾದರಿಯ ಅತ್ಯುತ್ತಮಕೃತಿಗಳಲ್ಲಿ ಒಂದೆನಿಸಿದೆ. ಇದಲ್ಲದೆ , ಕೆ. ಉಲ್ಲಾಸ ಕಾರಂತರ ಹುಲಿ ಸಂಶೋಧನೆಯ ವಿವರಗಳನ್ನು ಕುರಿತು ಗೋಪಾಲ್ ನಿರೂಪಿಸಿರುವ ’ ಹುಲಿರಾಯನ ಆಕಾಶವಾಣಿ ’ ಕೃತಿಯೂ, ವನ್ಯಜೀವಿ ಸಂರಕ್ಷಣೆಯ ಬಗೆಗೆ ತಜ್ಞರ ಸಂವಾದಗಳನ್ನು ಸಂಪಾದಿಸಿರುವ ’ ವನ್ಯಜೀವಿಗಳ ರಮ್ಯಲೋಕ ’ ಕೃತಿಯೂ ಹಲವು ಮುದ್ರಣಗಳನ್ನು ಕಂಡಿವೆ.

ಗೋಪಾಲ್ ರಚಿಸಿರುವ ಇತರ ಕೃತಿಗಳಲ್ಲಿ ಬಾಗೂರು ಚಂದ್ರು (ವ್ಯಕ್ತಿ ಪರಿಚಯ), ಡಾ. ಹೆಚ್. ಆರ್. ಅಪ್ಪಣ್ಣಯ್ಯ (ವ್ಯಕ್ತಿಪರಿಚಯ), ಆಚಾರ್ಯ ರಾಮಾನುಜರು (ಜೀವನಚಿತ್ರ), ನ್ಯಾಯ ಅಂದ್ರೆ ನ್ಯಾಯ (ನಾಟಕಗಳು), ಅಧ್ಯಾಪನದ ಅವಾಂತರಗಳು (ಲಘು ಪ್ರಬಂಧಗಳು), ಕೀರುತಿಯ ಬೆನ್ನು ಹತ್ತಿ (ಚಿಂತನ ಬರೆಹಗಳು), ಒಗಟುಗಳ ಗಂಟು-ನಂಟು (ಸಂಗ್ರಹ) ಕೊಡಗು: ವಿಸ್ಮಯದ ನಾಡು (ಅನುವಾದ) ಮೊದಲಾದವು ಸೇರಿವೆ. 

ಪ್ರಸ್ತುತ, ಅನಂತಕುಮಾರ್ ಪ್ರತಿಷ್ಠಾನದ ಪ್ರಕಾಶನ ವಿಭಾಗದ ಮುಖ್ಯಸ್ಥರಾಗಿರುವ ಗೋಪಾಲ್, ಅನಂತಪಥ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದಾರೆ. ಈಗಾಗಲೇ ಅನಂತಕುಮಾರರ ಜೀವನ-ಸಾಧನೆಗಳನ್ನು ಪರಿಚಯಿಸುವ ಅನಂತಚೇತನ ಎಂಬ ಪುಸ್ತಕವನ್ನು ಬರೆದಿದ್ದು,  ಅನಂತಕುಮಾರರ ಬದುಕನ್ನು ಎರಡು ಸಂಪುಟಗಳಲ್ಲಿ ಸಮಗ್ರವಾಗಿ ಪರಿಚಯಿಸುವ  ಲೇಖನದಲ್ಲಿ ತೊಡಗಿದ್ದಾರೆ.  ಇವುಗಳಲ್ಲಿ ಮೊದಲನೆಯ ಸಂಪುಟವಾಗಿ ’ಅನಂತಯಾನ ’ ಇತ್ತೀಚೆಗೆ ಪ್ರಕಟವಾಗಿದೆ.

ವನ್ಯಜೀವಿ ಸಂರಕ್ಷಣೆಯ ಮಹತ್ತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಸಲುವಾಗಿ ಟಿ.ಎಸ್. ಗೋಪಾಲ್ ಬರೆದ ’ ಕಾಡು ಕಲಿಸುವ ಪಾಠ ’ ಕೃತಿಗೆ 2013 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನವು ಲಭಿಸಿದೆ.

Details

Date:
November 5
Time:
6:30 pm - 7:30 pm UTC+5.5

Organizer

Youth Photographic Society
Email:
contactus@ypsbengaluru.com
View Organizer Website

Venue

State Youth Centre
State Youth Centre,Nrupathunga Road
Bangalore, Karnataka 560001 India
+ Google Map